Monday, July 20, 2009

ಒಂದೇ ಒಂದು ಆಸೆ...

ಆಸೆ ನನಗೊಂದೇ ಆಸೆ, ಸಖಿ,
ಅವನೊಂದಿಗೆ ಜಗಳವಾಡುವಾಸೆ!
ಆಸೆ ನನಗೊಂದೇ ಆಸೆ, ಸಖಿ,
ಅವನಲ್ಲಿ ಹುಸಿಗೋಪ ತೋರಿಸುವಾಸೆ!
ಆಸೆ ನನಗೊಂದೇ ಆಸೆ, ಸಖಿ,
ಅವನ ವಿರಹದಿಂದ ಪೀಡಿತಳಾಗುವಾಸೆ!

ಆಸೆ ನನಗೊಂದೇ ಆಸೆ, ಸಖಿ,
ಅವನ ಮುದ್ದಾಡುವಾಸೆ!
ಆಸೆ ನನಗೊಂದೇ ಆಸೆ, ಸಖಿ,
ಅನಾಂತವಾಗಿ ಅವನ ಸಂಗದಲ್ಲಿರುವಾಸೆ!
ಆಸೆ ನನಗೊಂದೇ ಆಸೆ, ಸಖಿ,
ಅವನೊಲುಮೆ ಗೆಲ್ಲುವಾಸೆ!
ಆಸೆ ನನಗೊಂದೇ ಆಸೆ, ಸಖಿ,
ಅವನ ಮಿಲನದಾಸೆ!
ಆಸೆ ನನಗೊಂದೇ ಆಸೆ, ಸಖಿ,
ಅವನೆಂದೂ ನನ್ನನ್ನಗಲಬಾರದೆಂಬಾಸೆ!
ಆಸೆ ನನಗೊಂದೇ ಆಸೆ, ಸಖಿ,
ಅವನೊಂದಿಗೆ ರಮಿಸುವಾಸೆ!
ಆಸೆ ನನಗೊಂದೇ ಆಸೆ, ಸಖಿ,
ಅವನ ರಮಿಸುವಾಗ ಸಮಯ ನಿಲ್ಲಬೇಕೆಂಬಾಸೆ!

ನನ್ನ ನಲ್ಲನಿಗೋ!
ನನ್ನೀ ಆಸೆಗಳೆಲ್ಲವನ್ನೂ ಪೂರೈಸಿ, ಅವುಗಳನ್ನು ಇನ್ನಿಲ್ಲದಂತೆ ಮಾಡಿ,
ನನ್ನೊಬ್ಬಳನ್ನೇ ರಮಿಸುವಾಸೆ! :)

ಕಳಕೊಂಡೆನು!

ವಿಚಾರಿಸುವ ಮತಿಯನ್ನು ಕಳಕೊಂಡೆನೇ
ನಾ ಕಳಕೊಂಡೆನು!
ಆತನ ಬಳಿ ಹೋದಂತೆಲ್ಲ ಮತಿ ಭ್ರಮಣೆಯ ಕಳಕೊಂಡೆನೇ,
ನಾ ಕಳಕೊಂಡೆನು!
ಆತನ ಸೇರಿ ಸರಿ-ತಪ್ಪು ತಿಳಿಯದವಳಾದೆನೇ,
ನಾ ತಿಳಿಯದವಳಾದೆನು!
ಆತನ ಸಹವಾಸದಲಿ ಉಪವಾಸ ವ್ರತಾದಿಗಳನ್ನು ಮರೆತೆನೇ,
ನಾ ಮರೆತೆನು!
ಆತನ ಮೂದಿಯಲ್ಲಿ ನಾನೇ ಅವನೋ, ಅವನೇ ನಾನೋ ಅರಿಯದಾದೆನೇ
ನಾ ಅರಿಯದಾದೆನು!
ಆತನ ಸಾನ್ನಿಧ್ಯದಲ್ಲಿ ನಾ ದುಃಖ ಕಳಕೊಂಡೆನೇ,
ನಾ ಭಯ ಕಳಕೊಂಡೆನು!

ಇಷ್ಟೆಲ್ಲಾ ಕಳಕೊಂಡೂ ಸಹ ನನಗಿನ್ನೂ ಆಸೆ,
ನನಗಿನ್ನೂ ಆಸೆ!
ಅವನೆದುರು ನಿಂತು ನಾಚಿ ನೀರಾಗುವಾಸೆ ಸಖಿ,
ನೀರಾಗುವಾಸೆ!

ದಾಹ!

ಮಿಲನದ ಆ ಸಮಯದಲ್ಲಿ ಓ ನಲ್ಲನೆ!
“ನಾನೇ” ನೀನಾಗುವೆನೋ, ಅಥವಾ
“ನೀನೇ” ನಾನಾಗುವೆಯೋ, ನಾ ತಿಳಿಯೆ!

ಆ ಮಧುರ ಕ್ಷಣದ ಮೆಲುಕು ಹಾಕುವಾಗ
ಸವತಿಯಂತೀ ಪ್ರಶ್ನೆ ಬರಲು
ನೀನೇ ಅವಳನ್ನು ಹೊರದಬ್ಬಿಸೆಂದು

ಪುನಃ ಒಂದಾಗುವ ಸವಿಗನಸಲಿ
ವಿಚಾರದ ಹಾಸಿಗೆಯ ಬಿಡಿಸಿ
ಕಾದಿಹೆನು, ಕಾದಿಹೆನು ಎಂತು ಬರುವೆ, ಪ್ರಾಣೇಶ್ವರ!

ತೀವ್ರ ದಾಹದಲಿರುವೆ
ಕನಿಕರಿಸಿ ದಾಹ ನೀಗಿಸೊಲ್ಲೆಯ...
ನಾಥ...!!!

Sunday, July 5, 2009

ಏನಾದರೇನು!

ಬಿಸಿಲಾದರೇನು ಮಳೆಯಾದರೇನು!
ಕೊಡೆಯಂತೆ ನನ್ನ ಕಾಯಲು ನಿನ್ನ ದಯೆಯಿಲ್ಲವೇನು!
ಗುಹೆಯಲ್ಲಿದ್ದರೇನು ಅರಮನೆಯಲ್ಲಿದ್ದರೇನು!
ಸದಾ ನನ್ನನ್ನು ರಕ್ಷಿಸುವ ನಿನ್ನ ದಯೆಯಿಲ್ಲವೇನು!

ಸುಖವಾದರೇನು ದುಃಖವಾದರೇನು!
ಆನಂದದಲ್ಲಿ ನನ್ನ ಮುಳುಗಿಸಲು ನಿನ್ನ ದಯೆಯಿಲ್ಲವೇನು!
ಜಯವಾದರೇನು ಅಪಜಯವಾದರೇನು!
ಇದ್ದಲ್ಲಿಂದ ಮೇಲೆಬ್ಬಿಸಲು ನಿನ್ನ ದಯೆಯಿಲ್ಲವೇನು!

ಹೂವಾದರೇನು ಮುಳ್ಳಾದರೇನು!
ಅದ್ಭುತ ಪರಿಮಳ ಸೂಸುವ ನಿನ್ನ ದಯೆಯಿಲ್ಲವೇನು!
ಸಿಹಿಯಾದರೇನು ಕಹಿಯಾದರೇನು!
ಸವಿರುಚಿಯಾದ ನಿನ್ನ ದಯೆಯಿಲ್ಲವೇನು!

ಏನಾದರೇನು, ನನ್ನ ಕಾಂತನೆ, ಶ್ರೀ ರಮಣನೆ!
ನಿನ್ನ ದಯೆಯೊಂದಿದ್ದರೆ ಬೇರೆಲ್ಲ ಹೇಗಿದ್ದರೇನು!